ಚಂಬೈ ವೈದ್ಯನಾಥ ಭಾಗವತರು- 
1896, ಹಿರಿಯ ಹೆಸರಾಂತ ದಾಕ್ಷಿಣಾತ್ಯ ಸಂಗೀತ ವಿದ್ವಾಂಸರ ಪೈಕಿ ಒಬ್ಬರು. ಪಾಲಘಾಟ್ ಜಿಲ್ಲೆಯ ಚಂಬೈ ಗ್ರಾಮ ಇವರ ಹುಟ್ಟೂರು. ಪ್ರಸಿದ್ಧ ಸಂಗೀತ ವಿದ್ವಾಂಸರಾಗಿದ್ದ ದೊಂಡಕುಳದಿ ಅನಂತರಾಮ ಭಾಗವತರು ಇವರ ತಂದೆ. ತಂದೆಯೇ ಇವರ ವಿದ್ಯಾಗುರುಗಳೂ ಹೌದು. ಭಾಗವತದ ಸಂಗೀತಜೀವನ ಚಿಕ್ಕವಯಸ್ಸಿನಲ್ಲೇ ಪ್ರಾರಂಭವಾಯಿತು. 8-10 ವಯಸ್ಸಿನಲ್ಲಿಯೇ ಶಾರೀರ ಕೆಟ್ಟುಹೋದ ಕಾರಣ ಪಿಟೀಲುವಾದನವನ್ನು ಅಭ್ಯಾಸ ಮಾಡಿದರು. ಹಲವು ವರ್ಷಗಳ ಅನಂತರ, ಇವರ ಆರಾಧನಾಮೂರ್ತಿಗಳಾದ ಶ್ರೀ ಗುರುವಾಯರ್ ಅಪ್ಪನ್ ಮತ್ತು ಕೊಲ್ಲೂರು ಮೂಕಾಂಬಿಕೆಯರ ಅನುಗ್ರಹದಿಂದ ಇವರ ಶಾರೀರ ಸರಿಹೋಗಿತಲ್ಲದೆ ಸಂಗೀತ ಕಲಿಕೆಯೂ ಅಡೆತೆಯಿಲ್ಲದೆ ನಡೆಯಿತು. ತಮ್ಮ 27ನೆಯ ವಯಸ್ಸಿನಲ್ಲಿ ಇವರು ಮದ್ರಾಸಿನ ಗೋಖಲೆಭವನದಲ್ಲಿ ಪ್ರಥಮ ಕಚೇರಿ ಮಾಡಿದರು. ಅನಂತರ ಚೌಡಯ್ಯ ಮತ್ತು ಮಣಿಗಳೊಂದಿಗೆ ಇವರು ಅನೇಕಾನೇಕ ಕಚೇರಿಗಳನ್ನು ನಡೆಸಿದರು. ಇಡೀ ಭಾರತದಲ್ಲಿ ಒಳ್ಳೆಯ ಹೆಸರುಗಳಿಸಿದರು. ಪಾಲಘಾಟ್ ಟಿ.ಎಸ್. ಮಣಿ ಅಯ್ಯರನ್ನು ಬೆಳಕಿಗೆ ತಂದವರು ಇವರೇ. ಪಿಟೀಲ್ ಗೋವಿಂದಸ್ವಾಮಿ ನಾಯಿಡು, ಅಳಗನಂಬಿ ದಕ್ಷಿಣಾಮೂರ್ತಿ ಪಿಳ್ಳೆ ಇವರ ಜೊತೆಯಲ್ಲಿ ಅನೇಕ ಕಚೇರಿಗಳನ್ನು ಮಾಡಿರುತ್ತಾರೆ. ತಿಂಗಳಲ್ಲಿ 20 ರಿಂದ 25 ಕಚೇರಿಗಳು ನಡೆದದ್ದೂ ಉಂಟು. ಕೆಲವು ಸಂದರ್ಭದಲ್ಲಿ ಒಂದೇ ದಿವಸ 2 ಕಚೇರಿಗಳು ನಡೆದಿವೆ. ಇವರು ಸಾಂಪ್ರದಾಯಿಕವಾದ ಸಂಗೀತವನ್ನು ಕಾಪಾಡಿಕೊಂಡು ಬಂದಿರುತ್ತಾರೆ. ಅದರಂತೆಯೇ ತಮ್ಮ ಆಚಾರ, ವ್ಯವಹಾರದಲ್ಲೂ ಇವರು ಸಂಪ್ರದಾಯಸ್ಥರು. ಶಿಸ್ತುಸಂಯಮದಿಂದ ಕೂಡಿದ ಸಾತ್ವಿಕಜೀವಿಗಳು, ಮಹದೇವನ ಭಕ್ತರು, ತುಂಬ ಸರಳರು, ಯಾವಾಗಲೂ ಹಸನ್ಮುಖಿಗಳು, ಹಿರಿಯ ಸಾಧಕರು. 55ನೆಯ ವಯಸ್ಸಿನಲ್ಲಿ ಮತ್ತೆ ಇವರ ಶಾರೀರ ಸಂಪತ್ತು ಕಡಿಮೆಯಾಯಿತಾದರೂ ಗುರುವಾಯರ್ ದೇವನ ಕೃಪೆಯಿಂದ ಮತ್ತೆ ನಾಲ್ಕು ವರ್ಷಗಳಲ್ಲಿ ಸರಿಹೋಯಿತು. ಇವರ ಗಾಯನದಲ್ಲಿ ಬಿಕ್ಕಟ್ಟಿನ ಲಯ, ಶ್ರುತಿಬದ್ಧತೆ, ಗಂಭೀರನಾದಗಳನ್ನು ಕಾಣಬಹುದು. ಒಂದು ಕೃತಿಯನ್ನು ಮೊದಲಿನಿಂದ ಕಡೆಯವರೆಗೂ ಒಂದೇ ಸಮನಾದ ಕಾಲಪ್ರಮಾಣದಲ್ಲಿ ನಡೆಸುವುದು, ತ್ರಿಕಾಲದಲ್ಲೂ ಸ್ವರವಿನ್ಯಾಸಮಾಡುವುದು ಅದರಲ್ಲಿ ಸ್ಫುಟತೆಯನ್ನೂ ತೋರುವುದು ಇವರ ವೈಶಿಷ್ಟ್ಯ. ಕೃತಿಗಳಿಗೆ ನೆರವಲ್ ಮಾಡುವ ಪದ್ಧತಿ ಇವರಲ್ಲಿ ವಿಶೇಷವಾಗಿ ಎದ್ದುಕಾಣುತ್ತದೆ. ಮೃದಂಗ ನುಡಿಸಲು ಬಾರದಿದ್ದರೂ ಮೃದಂಗ ಜತಿಗಳನ್ನು ಇವರು ಚೆನ್ನಾಗಿ ತಿಳಿದಿದ್ದಾರೆ. ನಾಲ್ವಡಿ ಕೃಷ್ಣರಾಜ ಒಡೆಯರವರು ಇವರಿಗೆ ಬೆಲೆಬಾಳುವ ಖಿಲ್ಲತ್ತುಗಳನ್ನೂ ಉಚಿತ ಸಂಭಾವನೆಯನ್ನೂ ಕೊಟ್ಟಿರುತ್ತಾರೆ. ರಾಷ್ಟ್ರಪ್ರಶಸ್ತಿಯಲ್ಲದೆ ಇವರಿಗೆ ಸಂಗೀತಕಳಾನಿಧಿ ಇತ್ಯಾದಿ ಹಲವಾರು ಬಿರುದುಗಳು ಬಂದಿವೆ.
(ಆರ್.ಸಿ.ಆರ್.ಜಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ